ಮಾಧವರಾವ್, ಎನ್		
1887-1972. ದಕ್ಷ ಆಡಳಿತಾಧಿಕಾರಿ, ವಿದ್ವಾಂಸ. ಮೈಸೂರು ಸಂಸ್ಥಾನದ ದಿವಾನರು (1941-46). ಪೂರ್ಣಹೆಸರು ನ್ಯಾಪತಿ ಮಾಧವರಾವ್. 1877 ಜೂನ್ 8ರಂದು ಮಚಲೀಪಟ್ಟಣದಲ್ಲಿ ಜನಿಸಿದರು. ತಂದೆ ಎನ್.ವೆಂಕಟಕೃಷ್ಣರಾವ್, ತಾಯಿ ವೆಂಕಟನರಸಮ್ಮ. ಮಚಲೀಪಟ್ಟಣದ ನೋಬಲ್ ಕಾಲೇಜು, ಮದರಾಸಿನ ಪಚ್ಚಯಪ್ಪ ಕಾಲೇಜು ಹಾಗೂ ಸರ್ಕಾರಿ ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ.ಇ.ಎಲ್. ಪದವಿಗಳನ್ನು ಪಡೆದು ಮೈಸೂರು ಸರ್ಕಾರದ ಸಿವಿಲ್ ಸೇವೆಗೆ ನೇಮಕಗೊಂಡರು (1907). ಗುಬ್ಬಿ ಮೈಸೂರು ಮತ್ತು ಸಾಗರಗಳಲ್ಲಿ ಸಬ್‍ಡಿವಿಶನ್ ಅಧಿಕಾರಿಯಾಗಿಯೂ ತರುವಾಯ ಎಫಿಷಿಯೆನ್ಸಿ ಆಡಿಟರ್, ದಿವಾನರಿಗೆ ಆಪ್ತ ಕಾರ್ಯದರ್ಶಿ, ಸ್ವಲ್ಪ ಕಾಲ ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಡೈರೆಕ್ಟರ್ ಮತ್ತು ಆ ಸಂಸ್ಥೆಯ ಆಡಳಿತ ಮಂಡಲಿಯ ಕಾರ್ಯದರ್ಶಿಯೂ ಆಗಿದ್ದರು. ತರುವಾಯ ಮೈಸೂರು ಪುರಸಭಾಧ್ಯಕ್ಷ, ಅನಂತರ ಮೈಸೂರು ಸರ್ಕಾರದ ಕಾರ್ಯದರ್ಶಿ, ಲಂಡನ್ನಿನಲ್ಲಿ ಮೈಸೂರು ಟ್ರೇಡ್ ಕಮೀಷನರ್ ಆಗಿದ್ದರು. ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರೊಂದಿಗೆ ಲಂಡನ್ನಿನಿಂದ ಹಿಂತಿರುಗಿದ ಮೇಲೆ ಕಂದಾಯ ಕಮಿಷನರ್ ಆದರು. 1935ರಲ್ಲಿ ಮೈಸೂರು ಸಂಸ್ಥಾನದ ಆಡಳಿತ ಪರಿಷತ್ತಿನ ಸದಸ್ಯರಾದರು. 1941ರಿಂದ ದಿವಾನರಾಗಿದ್ದು 1946ರಲ್ಲಿ ಆ ಹುದ್ದೆಯಿಂದ ನಿವೃತ್ತರಾದರು. ವಾಷಿಂಗ್‍ಟನ್ ನಗರಕ್ಕೆ ಭಾರತ ಆಹಾರ ನಿಯೋಗದ ಸದಸ್ಯರಾಗಿ ಹೋಗಿದ್ದರು (1946).

ನಿವೃತ್ತರಾದ ಮೇಲೆ ಪೂರ್ವ ರಾಷ್ಟ್ರಗಳ ಸಂಘಕ್ಕೆ ಸಲಹೆಗಾರರಾಗಿದ್ದರು. ರಾಜ್ಯ ವ್ಯವಸ್ಥಾಸಭೆಯ ಮತ್ತು ಅದರ ಕರಡು ರಚನಾ ಸಮಿತಿಯ ಸದಸ್ಯರಾಗಿದ್ದರು. ಹೈದರಾಬಾದಿನ ಭೂಸುಧಾರಣ ಸಮಿತಿಯ ಅಧ್ಯಕ್ಷರಾಗಿದ್ದರು ರಾಜಸ್ಥಾನದ ಫಿರ್ಕ ತನಿಖಾ ಸಮಿತಿಯ ಅಧ್ಯಕ್ಷರಾಗಿದ್ದರು. ಬೆಂಗಳೂರು ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾಗಿದ್ದರು. ಮಾಧವರಾಯರು ಸ್ವಾತಂತ್ರ್ಯಪೂರ್ವ ಮೈಸೂರು ಸರ್ಕಾರದ ಗಣ್ಯ ಅಧಿಕಾರಿಗಳಲ್ಲೊಬ್ಬರು. ಇವರು ಬ್ರಿಟಿಷ್ ಸರ್ಕಾರದಿಂದ ಸಿ.ಐ.ಇ. ಪದವಿಯನ್ನೂ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪ್ರಧಾನ ಶಿರೋಮಣಿ ಎಂಬ ಬಿರುದನ್ನೂ ಗಳಿಸಿದ್ದರು. ಗೋಖಲೆ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಫೇರ್ಸ್ ಮತ್ತು ಫೋರಮ್ ಆಫ್ ಇಂಟರ್ ನ್ಯಾಷನಲ್ ಅಫೇರ್ಸ್ ಸಂಸ್ಥೆಗಳೊಡನೆಯೂ ಸಂಬಂಧವಿಟ್ಟುಕೊಂಡಿದ್ದರು. 1972 ಆಗಸ್ಟ್ 28ರಂದ ಬೆಂಗಳೂರಿನಲ್ಲಿ ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ